ಕ್ರೆಬ್ಸ್ ಯೂರಿಯಾ ಚಕ್ರ 

ಅಮೈನೋ ಆಮ್ಲಗಳಲ್ಲಿನ -NH2 ಗುಂಪು ದೇಹದಿಂದ ಯೂರಿಯಾ ರೂಪದಲ್ಲಿ ವಿಸರ್ಜನೆಯಾಗುವ ಪಥ. ಕ್ರೆಬ್ಸ್ ಈ ಪಥವನ್ನು ಆವಿಷ್ಕರಿಸಿದುದರಿಂದ ಆತನ ಹೆಸರನ್ನು ಸೇರಿಸಿ ಹೇಳುವುದು ವಾಡಿಕೆ. (ನೋಡಿ- ಕ್ರೆಬ್ಸ್-ಸರ್-ಹ್ಯಾನ್ಸ್-ಅಡಾಲ್ಫ್) ಆರ್ನಿಥೀನ್ ಚಕ್ರ ಎಂಬುದು ಪರ್ಯಾಯ ನಾಮ. ಯೂರಿಯಾದ ತಯಾರಿಕೆ ನಡೆಯುವುದು ಕೆಲವು ರಾಸಾಯನಿಕ ವಸ್ತುಗಳು ಮತ್ತು ಎನ್‍ಜೆóೈಮುಗಳು ಸೇರಿ ನಡೆಯುವ ಚಕ್ರೀಯ ರಾಸಾಯನಿಕ ಕಾರ್ಯದಿಂದ. ಆಹಾರದಲ್ಲಿನ ಪ್ರೋಟೀನು ಅರಗಿ ಅಮೈನೋ ಆಮ್ಲದ ಅಣುಗಳಾಗಿ ರಕ್ತದ ಮೂಲಕ ದೇಹದ ಎಲ್ಲ ಭಾಗಗಳಿಗೂ ಹೋಗಿ ಸಂಶ್ಲೇಷಣೆ ಹೊಂದಿ ಪ್ರೋಟೀನಿನ ಅಣುಗಳಾಗುತ್ತವೆ. ಈ ಕ್ರಿಯೆಯಲ್ಲಿ ಅದರಿಂದ ಬರಬಹುದಾದ ಅಮೈನೋ ಅಯಾನು ದೇಹಕ್ಕೆ ವಿಷ. ಆದ್ದರಿಂದ ಬಿಡುಗಡೆಯಾಗುವ ಮುಂಚೆಯೇ ಅಥವಾ ಬಿಡುಗಡೆಯಾದ ಒಡನೆಯೇ ಅದನ್ನು ದೇಹಕ್ಕೆ ವಿಷವಾಗಿರದ ಯೂರಿಯಾ ರೂಪಕ್ಕೆ ಪರಿವರ್ತಿಸಬೇಕು. ಈ ರಾಸಾಯನಿಕ ಕಾರ್ಯ ಪಥ ಚಕ್ರೀಯವಾಗಿದೆ ಎಂದು ಸಿದ್ಧಾಂತ ಮಾಡಿದವ ಕ್ರೆಬ್ಸ್. ಇಂಗಾಲಾಮ್ಲದ ವಾಯುವಿನ ಒಂದು ಅಣು ಮತ್ತು ಅಮೋನಿಯದ ಎರಡು ಅಣುಗಳು ಸೇರಿ ಒಂದು ಯೂರಿಯಾ ಅಣುವಿನ ತಯಾರಿಕೆ ಆಗುತ್ತದೆ. ಈ ರಸಾಯನ ವಸ್ತು ದೇಹಕ್ಕೆ ಕೆಟ್ಟುದೇನೂ ಮಾಡುವುದಿಲ್ಲ. ಅಲ್ಲದೆ ನೀರಿನಲ್ಲಿ ಸುಲಭವಾಗಿ ಕರಗುವುದರಿಂದ ರಕ್ತದಲ್ಲಿ ಹರಿದು ಹೋಗಿ ಮೂತ್ರದ ಮೂಲಕ ದೇಹದಿಂದ ಹೊರದೂಡಲ್ಪಡುತ್ತದೆ.

ಸುಲಭ ರಾಸಾಯನಿಕ ಬದಲಾವಣೆಗೆ ಒಂದೇ ಒಂದು ವೇಗೋತ್ಕರ್ಷಕ ಎನ್‍ಜೈಮ್ ಸಾಕು. ಆದರೆ ಯೂರಿಯಾ ತಯಾರಿಕೆ ಬಲು ಕಷ್ಟ ಸಾಧ್ಯ. ಆದ್ದರಿಂದಲೇ ಒಂದು ವಿಶೇಷ ಮಾರ್ಗದ, ಚಕ್ರೀಯ ಪಥವ ಆವಶ್ಯಕತೆ. ಸ್ಥೂಲವಾಗಿ ಯೂರಿಯಾದ ತಯಾರಿಕೆಯಲ್ಲಿ ಭಾಗವಹಿಸುವ ರಾಸಾಯನಿಕಗಳು ಮೂರು-ಆರ್ನಿಥೀನ್, ಸಿಟ್ರುಲೀನ್ ಮತ್ತು ಆರ್ಜಿನೀನ್ ಎಂಬ ಅಮೈನೋ ಆಮ್ಲಗಳು. ಇಂಗಾಲಾಮ್ಲ ವಾಯುವಿನ ಒಂದು ಅಣು ಮತ್ತು ಅಮೋನಿಯದ ಒಂದು ಅಣುವನ್ನು ತೆಗೆದುಕೊಂಡು ಅಮೈನೊ ಆರ್ನಿಥೀನ್ ಆಮ್ಲ ಸಿಟ್ರುಲೀನ್ ಆಗುವುದು. ತರುವಾಯ ಸಿಟ್ರುಲೀನ್ ಅಮೈನೊ ಗುಂಪನ್ನು ಅಸ್ಪಾರ್ಟಿಕ್ ಆಮ್ಲದಿಂದ ಪಡೆದು ಆರ್ಜಿನೀನ್ ಆಗುವುದು. ಆರ್ಜಿನೇಸ್ ಎಂಬ ಎನ್‍ಜೈಮು ಆರ್ಜಿನೀನನ್ನು ಒಡೆದು ಯೂರಿಯಾದ ಒಂದು ಅಣು ಮತ್ತು ಆರ್ಜಿನೀನಿನ ಇನ್ನೊಂದು ಅಣುವನ್ನು ಬಿಡುಗಡೆ ಮಾಡುವುದು. ಈ ರಾಸಾಯನಿಕ ಚಕ್ರದ ವಿವರಗಳನ್ನು ಮುಂದಿನ ಪುಟದ ಚಿತ್ರದಲ್ಲಿ ಕೊಟ್ಟಿದೆ.

ಚಿತ್ರ-1

ಯೂರಿಯಾದ ತಯಾರಿಕೆಯ ಚಕ್ರದ ವಿವರಗಳನ್ನು ನೋಡಿದರೆ ಪ್ರಾರಂಭದಲ್ಲಿ ವೆಚ್ಚವಾಗಿದ್ದ ಆರ್ನಿಥೀನ್ ಮತ್ತೆ ಬಿಡುಗಡೆಯಾಗುವುದರಿಂದ ಮೊದಲಿನ ಪರಿಸ್ಥಿತಿಯೇ ಉಂಟಾಗುವುದು. ಈ ರಾಸಾಯನಿಕ ಕಾರ್ಯಗಳಿಂದ ಆದ ಫಲಿತಾಂಶ ಏನೆಂದರೆ ಅಮೋನಿಯದ ಒಂದು ಅಣು, ಅಸ್ಪಾರ್ಟಿಕ್ ಆಮ್ಲದ ಅಮೈನೊ ಗುಂಪು, ಇಂಗಾಲಾಮ್ಲ ವಾಯುವಿನ ಒಂದು ಅಣು ಸೇರಿ ಯೂರಿಯಾ ಅಣುವೊಂದು ತಯಾರಾದಂತಾಯಿತು. ಆರ್ನಿಥೀನ್, ಸಿಟ್ರುಲೀನ್ ಮತ್ತು ಆರ್ಜಿನೀನ್ ಒಂದು ಯಂತ್ರ ಚಕ್ರವಾದಂತಾಯಿತು. ಕುಂಬಾರ ಮಡಕೆಯನ್ನು ಮಾಡುವಂತೆಯೇ ಈ ರಾಸಾಯನಿಕ ಕಾರ್ಯ ಉಂಟು. ತಿರುಗುತ್ತಿರುವ ಚಕ್ರದ ಮೇಲೆ ಜೇಡಿಮಣ್ಣಿನ ಮುದ್ದೆಯಿಟ್ಟು, ಮಡಕೆಯ ರೂಪ ತಂದು ಬೇಕಾದರೆ ಹಿಡಿ ಸಿಕ್ಕಿಸಿ, ಅನಂತರ ಕತ್ತರಿಸಿ ಈಚೆ ಇಡುವಂತೆ ಯೂರಿಯಾ ತಯಾರಿಕೆಯ ಚಕ್ರವಿದೆ. ಮೊದಲನೆಯ ಹೆಜ್ಜೆಯಾದ ಸಿಟ್ರುಲೀನಿನ ತಯಾರಿಕೆಯಾಗಲು ಅಮೋನಿಯ ಮತ್ತು ಇಂಗಾಲಾಮ್ಲ ವಾಯು ಸೇರಿ ಕಾರ್ಬಮೈಲ್ ಫಾಸ್ಫೇಟ್ ಆಗಬೇಕು. ಈ ತಯಾರಿಕೆಯ ರಾಸಾಯನಿಕ ಕ್ರಿಯೆಯ ಎನ್‍ಜೈಮನ್ನು ಕ್ರಿಯಾಶಕ್ತವನ್ನಾಗಿ ಮಾಡಲು ಅಸಿಟೈಲ್ ಗ್ಲುಟಮೇಟ್ ಎಂಬುದು ಬೇಕು. ಇದಲ್ಲದೆ ಬೇಕಾದ ಫಾಸ್ಫೇಟನ್ನೂ ಶಕ್ತಿಯನ್ನೂ ಒದಗಿಸಲು ಶಕ್ತಿ ಹೊಂದಿರುವ ಎಟಿಪಿ ಎಂಬ ರಾಸಾಯನಿಕ ಬೇಕು. ಹಾಗೆಯೆ ಎರಡನೆಯ ಹೆಜ್ಜೆಗೂ ಶಕ್ತಿಯ ಆವಶ್ಯಕತೆ ಇರುವುದರಿಂದ ಯೂರಿಯ ತಯಾರಿಕೆಗೆ ಶಕ್ತಿಯ ವೆಚ್ಚ ಹೆಚ್ಚು. ಆದರೆ ವಿಧಿಯಿಲ್ಲ.

ಅಸ್ಪಾರ್ಟಿಕ್ ಆಮ್ಲ ಎರಡನೆಯ ಹೆಜೆಯಲ್ಲಿ ಭಾಗವಹಿಸಿ ಅಮೈನೊ ಗುಂಪನ್ನು ಕೊಟ್ಟ ಮೇಲೆ ಫ್ಯೂಮರಿಕ್ ಆಮ್ಲ ಆಗಿ ಕೆಲವೊಂದು ಬದಲಾವಣೆ ಹೊಂದಿ ಆಕ್ಸಾಲೊ ಅಸಿಟಿಕ್ ಆಮ್ಲವಾಗುತ್ತದೆ. ಇದು ಗ್ಲುಟಾಮಿಕ್ ಆಮ್ಲದ ಮುಖಾಂತರ ಬೇರೆ ಬೇರೆ ಅಮೈನೊ ಆಮ್ಲಗಳಿಂದ ಅಮೈನೊ ಗುಂಪನ್ನು ಬೇರೆ ತೆಗೆದುಕೊಂಡು ಅಸ್ಪಾರ್ಟಿಕ್ ಆಮ್ಲವಾಗಲು ಏರ್ಪಾಡು ಇದೆ. ಒಟ್ಟಿನಲ್ಲಿ ಬೇಡದ ಅಮೈನೊ ಆಮ್ಲಗಳು ತಮ್ಮಲ್ಲಿನ ಅಮೈನೊ ಗುಂಪನ್ನು ಯೂರಿಯ ತಯಾರಿಕೆಗೆ ಈ ರೀತಿ ಕೊಟ್ಟಂತಾಗುತ್ತದೆ. ಯೂರಿಯದ ತಯಾರಿಕೆ ಆಗುವುದು ಪಿತ್ತಕೋಶದಲ್ಲಿ. ಮೂತ್ರಜನಕಾಂಗಕ್ಕೆ ಸ್ವಲ್ಪ ಶಕ್ತಿ ಇದ್ದರೂ ಪಿತ್ತಕೋಶದಲ್ಲಿ ಈ ಕಾರ್ಯಕ್ಕೆ ಬೇಕಾಗುವ ಎಲ್ಲ ಎನ್‍ಜೈಮುಗಳೂ ಹೆಚ್ಚಾಗಿದ್ದು ಪರಿಸ್ಥಿತಿಯೂ ಅನುಕೂಲವಾಗಿರುವುದರಿಂದ ಪಿತ್ತಕೋಶವೇ ಯೂರಿಯ ತಯಾರಿಕೆಯ ರಂಗ.
(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ